ಕೆರೆಗೆ ಹಾರ ಕಥನಗೀತೆಗಳಲ್ಲೇ ಬಹಳ ಪ್ರಸಿದ್ದವಾದುದು. ಹೃದಯ ವಿದ್ರಾವಕವಾದ ದುರಂತ ಗೀತೆ. ಹೆಣ್ಣನ್ನು ಒಂದು ವಸ್ತುವಾಗಿ ಬಳಸಿರುವುದು ಇಲ್ಲಿ ಎದ್ದು ಕಾಣುವ ಅಂಶ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನ ಮೂಲ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಥನಗೀತೆ ಪ್ರಸ್ತುತ ಪಡಿಸುತ್ತದೆ. ಭಾರತೀಯ ಜನಪದ ಸಾಹಿತ್ಯದಲ್ಲಿ ತ್ಯಾಗ, ಬಲಿದಾನಕ್ಕೆ ಸಂಬಂಧಿಸಿದ ಕಥನಗೀತೆಗಳು ಹೇರಳವಾಗಿ ದೊರೆಯುತ್ತವೆ. ಕಥನಗೀತೆಗಳು ಜನಪದ ಸಂಸ್ಕೃತಿಯ ಮಹಾದರ್ಶನವನ್ನು ಮಾಡಿಸುತ್ತವೆ. ಇಲ್ಲಿ ಗಂಡಿಗಿಂತ ಹೆಣ್ಣಿನ ಬಹುಮುಖಗಳ ಅನಂತದರ್ಶನ ಅನಾವರಣಗೊಂಡಿವ. == ಪೀಠಿಕೆ == ಯಾವುದೇ ಜನಪದ ಸಾಹಿತ್ಯ ಜನ ಸಾಮಾನ್ಯರ, ಅಜ್ಞಾತ ಕವಿಗಳ ಬದುಕಿನ ಸಮಗ್ರ ಅನುಭವ, ಅನುಭಾವಗಳನ್ನು ಮೌಖಿಕವಾಗಿ ಅಭಿವ್ಯಕ್ತಗೊಳಿಸುವಂತಹುದು. ಮನುಷ್ಯನ ಜೀವನದ ಪ್ರತಿಯೊಂದು ಗಳಿಗೆಗಳನ್ನು ಅರ್ಥಪೂರ್ಣವಾಗಿ ಕಳೆಯುವ ಅವರು, ತಮ್ಮ ಆಸರಿಕೆ, ಬೇಸರಿಕೆ ಕಳೆಯಲು ಹಾಡಿಕೊಂಡ ಸುದೀರ್ಘ ಪದಗಳು ಕಥನಗೀತೆಗಳೆನಿಸಿವೆ. ಕಥನಗೀತೆಗಳು ಜನಪದ ಸಂಸ್ಕೃತಿಯ ಮಹಾದರ್ಶನವನ್ನು ಮಾಡಿಸುತ್ತವೆ. ಇಲ್ಲಿ ಗಂಡಿಗಿಂತ ಹೆಣ್ಣಿನ ಬಹುಮುಖಗಳ ಅನಂತ ದರ್ಶನ ಅನಾವರಣಗೊಂಡಿವೆ. ಜೊತೆಗೆ ಜೀವನದ ಪ್ರತೀ ಹಂತದಲ್ಲೂ ಹೆಣ್ಣಿನ ಪಾತ್ರ ಎಷ್ಟೊಂದು ಮುಖ್ಯ ಎಂಬುದರ ಅರಿವನ್ನು ಮಾಡಿಕೊಡಲಾಗಿದೆ. ಜನಪದ ಸಾಹಿತ್ಯ ದಲ್ಲಿ ಪದ್ಯಭಾಗ ಜನಪ್ರಿಯಗೊಂಡಿರುವಷ್ಟು ಬೇರೆ ಪ್ರಕಾರಗಳು ಜನಪ್ರಿಯಗೊಂಡಿಲ್ಲವೆಂದೇ ಹೇಳಬಹುದು. ಇವುಗಳ ರಚನಕಾರರು ಯಾರೆಂಬುದಾಗಲೀ, ಅವರ ಕಾಲಮಾನವಾಗಲೀ ತಿಳಿದಿಲ್ಲ. ಸುಮಾರು ೩೦-೩೫ವರ್ಷಗಳ ಹಿಂದೆ ಶ್ರೀಯುತ ಬೆಟಗೇರಿ ಕೃಷ್ಣಶರ್ಮರು ಗ್ರಾಮೀಣ ಪ್ರದೇಶವೊಂದರಲ್ಲಿ ಜನಪದ ಕ್ಷೇತ್ರಕಾರ್ಯ ಮಾಡುತ್ತಿರುವಾಗ, ಅಲ್ಲಿ ಒಂದು ಕೋಲಾಟದ ಪದದಿಂದ ಆಕರ್ಷಿತರಾಗಿ, ಅದನ್ನು ಸಂಗ್ರಹಿಸುತ್ತಾರೆ, ದಾಖಲಿಸುತ್ತಾರೆ. ಅದೇ 'ಕೆರೆಗೆಹಾರ' ಕಥನಗೀತೆ. ಈ ಗೀತೆ ಸುಮಾರು ೧೨೦ ಸಾಲುಗಳನ್ನು ಒಳಗೊಂಡಿದೆ. == ಆ'ಹಾರ' ಪದ್ದತಿ == ಭಾರತೀಯ ಜನಪದ ಸಾಹಿತ್ಯದಲ್ಲಿ ತ್ಯಾಗ, ಬಲಿದಾನಕ್ಕೆ ಸಂಬಂಧಿಸಿದ ಕಥನಗೀತೆಗಳು ಹೇರಳವಾಗಿ ದೊರೆಯುತ್ತವೆ. ಸಮಾಜದ ಸಮಷ್ಠಿ ಹಿತಕ್ಕಾಗಿ ಸ್ವ ಇಚ್ಛೆಯಿಂದ ಆತ್ಮಾರ್ಪಣೆ ಮಾಡಿ ಕೊಳ್ಳುವುದು ತ್ಯಾಗ ಎನಿಸಿದರೆ, ಸಾಯಲು ಇಷ್ಟವಿಲ್ಲದ ಜೀವವೂಂದು ಮನೆಯವರ ಒತ್ತಡಕ್ಕೆ ಮಣಿದು ಸಾಯುವುದು "ಬಲಿ" ಎನಿಸಿಕೊಳ್ಳುತ್ತದೆ. ಸಾಮಾನ್ಯ ಅರ್ಥದಲ್ಲಿ 'ಬಲಿ' ಎಂದರೆ ನಾವು ನಂಬಿರುವ ದೇವರಿಗೆ ಆಹಾರ/ನೈವೇದ್ಯ ಕೊಡುವ ಪ್ರಕ್ರಿಯೆ. 'ಎಡೆ'ಯಲ್ಲಿ ಎರಡು ವಿಧ. ಸಾತ್ವಿಕ ಆಹಾರ(ಸಸ್ಯಹಾರ)-ಸಸ್ಯಹಾರಿಗಳು ದೇವರಿಗೆ ಎಡೆ ಅರ್ಪಿಸುವಾಗ ಸಾತ್ವಿಕ ಆಹಾರವನ್ನು ನೈವೇದ್ಯ ಮಾಡಿದರೆ, ತಾಮಸ ಆಹಾರ(ಮಾಂಸಹಾರ)-ಮಾಂಸಹಾರಿಗಳು ಯಾವುದಾದರೊಂದು ಪ್ರಾಣಿಯನ್ನು ಕೊಂದು ಅಡುಗೆ ತಯಾರಿಸಿ ಅದನ್ನೇ ಎಡೆ ರೂಪದಲ್ಲಿ ದೇವರಿಗೆ ಅರ್ಪಿಸುವುದು ವಾಡಿಕೆ. ಅಂತೆಯೇ ಆದಿಯಿಂದಲೂ ಮನುಷ್ಯ 'ನರಬಲಿ' ಕೊಡುವ ಪದ್ದತಿ ಯನ್ನು ರೂಢಿಸಿ ಕೊಂಡಿದ್ದಾನೆ. ಅವನ ದೃಷ್ಠಿಯಲ್ಲಿ ಹೆಣ್ಣು ಒಂದು ವಸ್ತು ಮಾತ್ರ. ಆಹಾರ ತಿನ್ನುವ ಖಾದ್ಯವಾದರೆ, 'ಹಾರ' ಎಂಬುದು 'ಬಲಿ'ಯ ಪರ್ಯಾಯ ಪದವೆನಿಸಿದೆ. ಹಾಗಾಗಿ ಕನ್ಯೆ, ಬಸುರಿ, ಬಾಣಂತಿ, ಮುತ್ತೈದೆ, ಮುಂತಾದ ಸ್ತ್ರೀರತ್ನಗಳು ಬರಡು ಭೂಮಿಗೆ, ಕೋಟೆ-ಕೊತ್ತಲಗಳಿಗೆ, ಮಳೆಗೆ, ನಿಧಿಗೆ, ಮಾಟಮಂತ್ರಗಳಿಗೆ ಮತ್ತು ಕೆರೆಗೆ ಆಹುತಿಯಾದ ನಿದರ್ಶನಗಳಿವೆ. ಆ ದಿಶೆಯಲ್ಲಿ ಒಡ್ಡರಬೊಯಿ, ಹುಳಿಯಾರು ಕೆಂಚಮ್ಮ, ಕೆರೆ ಹೊನ್ನಮ್ಮ, ಕೆರೆಗೆ ಹಾರದ ಭಾಗೀರಥಿ ಪ್ರಮುಖವಾಗು ತ್ತಾರೆ. == ಕೆರೆಗೆಹಾರ ಕಥನಗೀತೆ == == ಗೀತೆಯ ಕೇಂದ್ರಬಿಂದು == ಕಲ್ಲನಕೇರಿ ಮಲ್ಲನಗೌಡನ ಮನೆ ಕಥನಗೀತೆಯ ಕೇಂದ್ರ ಬಿಂದು. ಹೇಗೆಂದರೆ- ಮಲ್ಲನಗೌಡ ಕಲ್ಲನಕೇರಿ ಗ್ರಾಮದ ಮುಖಂಡ. ಆತ ತನ್ನ ಊರಿನ ಜನರ ಹಿತಕ್ಕಾಗಿ ಕೆರೆಯೊಂದನ್ನು ಕಟ್ಟಿಸುವನು. ಆದರೆ ಆ ಕೆರೆಯಲ್ಲಿ ಬೊಗಸೆಯಷ್ಟು ನೀರು ಕೂಡ ಬರುವುದಿಲ್ಲ. ಇದರಿಂದ ವ್ಯಾಕುಲ ಗೊಂಡ ಗೌಡ ವಾಸ್ತವಾಂಶ ತಿಳಿದುಕೊಳ್ಳಲು ಜ್ಯೋತಿಷಿ ಬಳಿ ಶಾಸ್ತ್ರ ಕೇಳುತ್ತಾರೆ. ಆ ಜ್ಯೋತಿಷಿ ನಿಮ್ಮ ಮನೆತನದ ಹಿರಿಯಸೊಸೆ ಮಲ್ಲವ್ವನ ಕೆರೆಗೆ 'ಹಾರ'ಕೊಟ್ಟರೆ ಕೆರೆಯಲ್ಲಿ ನೀರು ಬಂದೇ ಬರುತ್ತದೆಂದು ಹೇಳಿದಾಗ, ಧೃತಿಗೆಟ್ಟ ಗೌಡ ತನ್ನ ಹೆಂಡತಿಯೊಡನೆ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸುವನು. ಹಿರಿಸೊಸೆ ಕೊಟ್ಟರೆ ಹಿರಿತನಕೆ ಯಾರಿಲ್ಲ ಕಿರಿಸೊಸೆ ಭಾಗೀರತಿಯನ್ನು ಕೆರೆಗೆ ಹಾರ ಕೊಡಲು ಅವರೆಲ್ಲ ನಿರ್ಧರಿಸುತ್ತಾರೆ. ಆದರೆ ಭಾಗಿರತಿಯನ್ನು ಈ ಬಗ್ಗೆ ಒಂದು ಮಾತು ಯಾರು ಕೇಳುವುದಿಲ್ಲ. == ಕಥನಗೀತೆಯ ಒಳನೋಟ == === ಭಾಗೀರಥಿಯ ಆಂತರ್ಯ ತೊಳಲಾಟ === ಇಲ್ಲಿ ಭಾಗೀರಥಿ ಅತ್ತೆ-ಮಾವನ ಮಾತನ್ನು ಮೀರದ ಸೊಸೆ. ಭಾಗೀರಥಿಗೂ ಮನೆಯಲ್ಲಿ ನಡೆವ ಮಾತುಕಥೆ ಗೊತ್ತಾದರೂ ಏನೊಂದು ಸೊಲ್ಲೆತ್ತದೆ, ಪ್ರತಿಭಟನೆಯನ್ನು ಮಾಡದೆ "ಶೀತಲ ಪ್ರವೃತ್ತಿ"ಯನ್ನು ಕಡೆವರೆಗೂ ಕಾಯ್ದು ಕೊಳ್ಳುತ್ತಾಳೆ. ಇಲ್ಲಿ ಆಕೆಯ ಮಾನಸಿಕ ವೇದನೆ, ಮನೋ ತಾಕಲಾಟ, ತಲ್ಲಣದ ತೀವ್ರತೆ ತವರಿಗೆ ಹೋದಾಗ, ಗೆಳತಿಯನ್ನು ಕಾಣಲು ಹೋದಾಗ ವ್ಯಕ್ತವಾಗುತ್ತದೆ. ಆಕೆಯ 'ಅಳು' ಬಲಿಯಾಗಲು ಇಷ್ಟವಿಲ್ಲದಿರುವುದನ್ನು ಸೂಚಿಸುತ್ತದೆ. "ಉಳಿದೇನು!ಉಳಿಯ ಬಹುದೇನೊ" ಎಂಬ ಆಸೆ ಕಡೆಯವರೆಗೂ ಇರುತ್ತದೆ. ಗೆಳತಿಯು ಕೂಡ ಪರಿಸ್ಥಿತಿ ಕೈಗೊಂಬೆಯಾದುದರಿಂದ ಭಾಗೀರಥಿಯನ್ನೂ ಸಾವಿನ ದವಡೆಯಿಂದ ಪಾರುಮಾಡಲು ಸಾಧ್ಯವಾಗುವುದಿಲ್ಲ. ತನ್ನ ಅಸಾಹಾಯಕತೆಯನ್ನು ನೆನೆವಾಗ ಅವಳಿಗೆ ದು:ಖ ಉಮ್ಮಳಿಸಿ ಬರುತ್ತದೆ. ಸಾಯುವ ದಿನವೂ ಕೂಡ ಭಾಗೀರಥಿ ಎಂದಿನಂತೆ ಮನೆಕೆಲಸದಲ್ಲಿ ತನ್ನನ್ನೂ ತೊಡಗಿಸಿಕೊಳ್ಳುತ್ತಾಳೆ. ಭಾಗೀರಥಿಯ ಮನೋವೇದನೆ ಆಕೆಯ ಅತ್ತೆ-ಮಾವನಿಗೆ ಅರಿವಾದರೂ,"ಸ್ಥಿತಪ್ರಜ್ಞೆ"ಕಾಯ್ದು ಕೊಳ್ಳುತ್ತಾರೆ. ಗೌಡನ ಮನೆಯವರು ಆರ್ಥಿಕವಾಗಿ ಬಲಾಢ್ಯರಾಗಿದ್ದರು ಎಂಬುದನ್ನು 'ಬಂಗಾರದ ಬುಟ್ಟಿ, ಸಿಂಗಾರದ ಸಿಂಬಿ' ಸೂಚಿಸುತ್ತವೆ. ವಿನಯ, ವಿಧೇಯತೆ, ಸಂಸ್ಕಾರ, ಸಂಸ್ಕೃತಿಯ ನಡವಳಿಕೆಗಳೇ ಭಾಗೀರಥಿಗೆ ಮುಳುವಾಗುತ್ತವೆ. ಗಂಗವ್ವನ ಪೂಜೆ "ಮಹಾತ್ಯಾಗ"ವೂಂದರ ಮುನ್ಸೂಚನೆ. 'ಬಿರಿ ಬಿರನೆ' ಎಂಬ ಪದ ಭಾಗೀರಥಿಯ ಮನದ ಭೀತಿ, ತಳಮಳ, ಆತಂಕ, ಬದುಕಬೇಕೆಂಬ ಆತುರತೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ ಮೆಟ್ಟಿಲೆನ್ನುವುದು ಅಭಿವೃದ್ಧಿಯ, ಬೆಳವಣಿಗೆಯ ದ್ಯೋತಕ. ಆದರಿಲ್ಲಿ (ಕೆರೆಯ)ಮೆಟ್ಟಿಲುಗಳು ವ್ಯಕ್ತಿಯೊಬ್ಬಳ ಸರ್ವನಾಶಕ್ಕೆ ಕಾರಣವಾಗುತ್ತವೆ. ಭಾಗೀರಥಿ ತನ್ನ ಅಸ್ತಿತ್ವದ ಉಳಿವಿಗಾಗಿ ಕೊನೆಯ ತನಕ ಹೋರಾಡಿ ವಿಫಲಳಾಗುತ್ತಾಳೆ. ಭಾಗೀರಥಿ ಸಾವನ್ನು ಸ್ವಾಗತಿಸುವಳಾಗಿದ್ದರೆ, ಮೆಟ್ಟಿಲನ್ನು ಹತ್ತುವ ಪ್ರಮೇಯವೆ ಬರುತ್ತಿರಲಿಲ್ಲ. ಕೆರೆಯಲ್ಲಿ ನೀರು ಉಕ್ಕಿ ಬಂದ ಕೂಡಲೆ ತಟಸ್ಥವಾಗಿ ನಿಂತು ಬಿಡುತ್ತಿದ್ದಳು. ಇಲ್ಲಿ ಹಾಗಾಗ ದಿರುವುದೇ ಮನೋಸಂಘರ್ಷಕ್ಕೆ ಕಾರಣವಾಗುತ್ತದೆ. ಆವಳನ್ನು ಆಕ್ರಮಿಸಲು ಬರುವ ಗಂಗೆ, ಅದರಿಂದ ತಪ್ಪಿಸಿಕೊಳ್ಳಲು ಹೋರಾಡುವ ಭಾಗೀರಥಿಯ ರೀತಿ ಮನವನ್ನು ಆದ್ರವಾಗಿ ಸುತ್ತದೆ. ಬಲಿ ಸಮರ್ಪಣೆ ಎಷ್ಟು ಮೃದುವಾಗಿ ನಡೆಯುತ್ತದೆಯೊ, ಬಲಿ ಸ್ವೀಕಾರವೂ ಅಷ್ಟೇ ನವಿರಾಗಿ ನಡೆಯುತ್ತದೆ. === ಸಾವಿನ ನಿರ್ಣಾಯಕ ಸ್ಥಳ === ಗೆಳತಿಯ ಮನೆ ಭಾಗೀರಥಿಯ ಸಾವಿನ ನಿರ್ಣಾಯಕ ಸ್ಥಳವಾಗುತ್ತದೆ. ಗೆಳತಿ ಮೊದಲಿನಿಂದಲೂ ಭಾಗೀರಥಿಯ ಅಂತರಂಗವನ್ನು ಅರಿತಿದ್ದರೂ, ಆ ಕಾಲದಲ್ಲಿ ಭಾಗೀರಥಿ ಈ ಕಾರ್ಯವನ್ನು ನಿರಾಕರಿಸಿದ್ದರೆ ಆಗಬಹುದಾಗಿದ್ದ ಕೆಟ್ಟ ಪರಿಣಾಮವನ್ನು ಬಹುಶ: ಊಹಿಸಿರಬಹುದು. ಹಾಗಾಗಿ ಅವಳು "ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕ" ಎಂಬ ಹತಾಶೆ ಯ ಮಾತುಗಳನ್ನಾಡುವಳು. ಹಿರಿಯರ ಮಾತಿಗೆ ಪ್ರತಿಯಾಡದ ಸಮಾಜ ಅಂದಿದ್ದುದರಿಂದ, ಇಲ್ಲವೆ ಊರಿನ ಹಿತಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಭಾಗೀರಥಿಯ ಬಲಿ ಅನಿವಾರ್ಯ ಎಂಬುದನ್ನು ಗೆಳತಿ ಒಪ್ಪಿಕೊಂಡು ಆ ಮಾತನ್ನು ಹೇಳಿರಬಹುದು. ಭಾಗೀರಥಿಯು ತನ್ನ ಮನಸ್ಸನ್ನು ಕಲ್ಲು ಮಾಡಿಕೊಂಡು ಸಾಯಲು ಇಷ್ಟವಿಲ್ಲದಿದ್ದರು, ಬೇರೆ ದಾರಿ ಕಾಣದೆ ಸಾವಿಗೆ ಸಿದ್ದಳಾಗುತ್ತಾಳೆ. === ಅಂತಿಮ ಘಟ್ಟ === ಕಥನಗೀತೆಯ ಅಂತಿಮ ಘಟ್ಟ ಕೆರೆಯ ಆವರಣ. ಬಯಲಿನಂತೆ ಒಣಗಿ ಬರಡಾಗಿದ್ದ ಕೆರೆಯ ಅಂಗಳದೊಳಗೆ ಗಂಗೆಯ ಪೂಜೆಯ ವಿಧಿ-ವಿಧಾನಗಳು. ಬಾಗಿನ ಕೊಡುವ ಕಾರ್ಯ ಕ್ರಮ ನಡೆಯುತ್ತದೆ. ನಂತರ ನೈವೇದ್ಯ, ಪ್ರಸಾದ ಸ್ವೀಕರಣೆಯಾಗುತ್ತದೆ. ಊಟದ ನಂತರ ಉದ್ದೇಶ ಪೂರ್ವಕವಾಗಿ ಬಂಗಾರದ ಬಟ್ಟಲನ್ನು ಮರೆತು ಬರುವರು. ಬಂಗಾರದ ಬಟ್ಟಲು 'ಜೀವನ ಮೌಲ್ಯವನ್ನು' ತಿಳಿಸಿ ಕೊಡುತ್ತದೆ. ಭಾಗೀರಥಿ ಬಂಗಾರದ ಬಟ್ಟಲನ್ನು ಕೈಗೆ ತೆಗೆದು ಕೊಂಡು ಹೊರ ಬರುವ ಸಂದರ್ಭದಲ್ಲಿ ಗಂಗೆ ಅವಿರ್ಭವಿಸಿ ಬಂಗಾರದಂತ ಭಾಗೀರತಿ ಯನ್ನು ನವಿರಾಗಿ ತನ್ನೊಳಗೆ ಸೆಳೆದೊಯ್ಯುತ್ತಾಳೆ. === ಮಾದೇವರಾಯ === ಈ ಕಥನಗೀತೆ ಭಾಗೀರಥಿಯ ಸಾವಿನೊಂದಿಗೆ ಮುಕ್ತಾಯವಾಗುವುದಿಲ್ಲ. ಮತ್ತೆ ಸ್ವಲ್ಪ ಮುಂದುವರೆಯುವುದು. ಭಾಗೀರಥಿಯು ಕೆರೆಗೆ ಹಾರವಾಗುವ ಸಂದರ್ಭದಲ್ಲಿ ಆಕೆಯ ಗಂಡ ಸೈನ್ಯದಲ್ಲಿರುತ್ತಾನೆ. ದಂಡಿನಲ್ಲಿರುವ ಆತನಿಗೆ ಭಾಗೀರಥಿ ಕೆರೆಗೆ ಹಾರವಾದ ಆ ರಾತ್ರಿ ಒಂದು ದುಸ್ವಪ್ನ ಬೀಳುತ್ತದೆ-"ಸೆಲ್ಯ ಸುಟ್ಟಂಗಾಯ್ತು , ಕೋಲು ಮುರಿದಂಗ್ಹಾತು, ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗ್ಹಾಗಿ "ಆತ ಸಹಜವಾಗಿ ವ್ಯಾಕುಲಗೊಳ್ಳುತ್ತಾನೆ. ಕನಸಿನ ಈ ಮೂರು ಆಶಯಗಳು ಆತನ ಬದುಕಿನಲ್ಲಾದ ಅನಾಹುತದ ಅಂತರಾರ್ಥವನ್ನು ಅರ್ಥಪೂರ್ಣವಾಗಿ ವ್ಯಂಜಿಸಿವೆ. ಕನಸಿನಿಂದ ದುಗುಡಗೊಂಡ ಮಾದೇವರಾಯ ಆತಂಕದಿಂದ 'ಬತ್ತಲುಗುದುರಿ' ಹತ್ತಿ ತನ್ನ ಮನೆಗೆ ಧಾವಿಸಿ ಬರುವನು. ಇಲ್ಲಿ 'ಬತ್ತಲುಗುದುರೆ' ಎಂಬುದು ಅವನ ಮನೋವೇಗ, ಮಾನಸಿಕ ಉದ್ವೇಗ, ಜೀವನದ ಬಗೆಗಿನ ತಲ್ಲಣವನ್ನು ತಿಳಿಸುತ್ತದೆ. ತಾಯಿ ಮನೆಯಲ್ಲಿ, ತನ್ನ ಅತ್ತೆ ಮನೆಯಲ್ಲಿ ಮಡದಿ ಭಾಗೀರಥಿಯನ್ನು ಕಾಣದೆ ವಿಹ್ವಲಕ್ಕೆ ಒಳಗಾಗುತ್ತಾನೆ. ಪಟ್ಟು ಬಿಡದ ಮಾದೇವರಾಯ ಬತ್ತಲುಗುದುರೆ ಹತ್ತಿ ಗೆಳತಿ ಮನೆಗೆ ಧಾವಿಸುವನು. ಅಲ್ಲಿ ಗೆಳತಿ ಸತ್ಯ ಸಂಗತಿಯನ್ನು ಮಾದೇವರಾಯನಿಗೆ ಅರುಹುವಳು. ಇದರಿಂದ ಹತಾಶಗೊಂಡ ಮಾದೇವರಾಯ ಕಡು ದು:ಖಿತನಾಗಿ, ನಂಜನ್ನು ಕುಡಿದ ನಂಜುಂಡನಂತೆ ಸ್ಥಿತ ಪ್ರಜ್ಞನಾಗಿ, ಇಡೀ ವ್ಯವಸ್ಥೆಯ ಬಗ್ಗೆ ಮೌನ ತಾಳುತ್ತಾನೆ. ಯಾರ ಬಳಿಯು ಹೋಗದೆ, ಯಾರನ್ನು ಏನೂ ಪ್ರಶ್ನಿಸದೆ ಅಂತರ್ಮುಖಿಯಾಗುತ್ತಾನೆ. ಕೆರೆಯ ದಂಡೆಯ ಬಳಿಗೆ ಬಂದು ಸತ್ತ ಮಡದಿಯ ಸ್ಮರಿಸಿ ಕೊಳ್ಳುತ್ತಾ, ಪ್ರಶಂಸಿಸುತ್ತಾ ಮನಸಾರೆ ಅಳುತ್ತಾನೆ. ಒಂದು ಸುಂದರ ದಾಂಪತ್ಯದ ಬಾಂಧವ್ಯವನ್ನು ಮಾದೇವರಾಯ ಮಾತುಗಳು ವ್ಯಕ್ತ ಪಡಿಸುತ್ತವೆ. 'ನನ ಬಿಟ್ಟು ಎಲ್ಲಿಗ್ಹೋದೆ ?' ಎಂಬ ಮಾತಿನ ದಾರುಣತೆ ಮುಗಿಲು ಮುಟ್ಟಿ, ಅವನ "ಸತಿಭಕ್ತಿ"ಯನ್ನು ಜಗಜ್ಜಾಹೀರು ಮಾಡುತ್ತದೆ. ಸಾವಿನಲ್ಲಿ ಹೆಂಡತಿಯನ್ನು ಕೂಡುತ್ತಾನೆ. ಮಾದೇವರಾಯನ ನಿಷ್ಕಲ್ಮಶ ಪ್ರೀತಿ ಭಾಗೀರತಿಗೆ ಸಂದ ಅತ್ಯಂತ ಮೇರು ಗೌರವ. == ಮೌಢ್ಯ, ಸ್ಥಿತ್ಯಂತರ == ಕೆರೆಗೆ ಹಾರ ಕಥನಗೀತೆಯ ಸನ್ನಿವೇಶ, ಸಂದರ್ಭಗಳು ಓದುಗರನ್ನು ಆಕರ್ಷಿಸಿ, ಪ್ರತಿ ದೃಶ್ಯವೂ ಕಣ್ಣಿಗೆ ಕಟ್ಟುವಂತಾಗಿ ಮನವನ್ನು ತೇವಗೊಳಿಸುತ್ತವೆ. ಇಲ್ಲಿ ಭಾಗೀರಥಿ ಭೂಮಿ ತೂಕದ ಹೆಣ್ಣಾಗಿ, ಕ್ಷಮಯಾ ಧರಿತ್ರಿಯಾಗಿ, ಆದರ್ಶನಾರಿಯಂತೆ ಪೂಜನೀಯಳಾಗುವಳು. ಅವಳ ಉದಾತ್ತ ಮನೋದಾರ್ಢ್ಯ, ಮಾದೇವರಾಯನ ಅಪರಿಮಿತ ಪ್ರೇಮ ಸ್ಮರಣೀಯ. ಸಾಧಾರಣವಾಗಿ ಜನಪದ ಗೀತೆಗಳಲ್ಲಿ ಹಿರಿತನ, ವಿಧಿ-ವಿಧಾನ, ಸಂಸ್ಕಾರ-ಸಂಸ್ಕೃತಿ, ಸಂಪ್ರದಾಯ, ಅನುಷ್ಠಾನ, ಆಚರಣೆ, ಕೌಟುಂಬಿಕ ಹಿನ್ನೆಲೆ, ನಂಬಿಕೆ, ಮೂಢನಂಬಿಕೆ, ಕೆಲವು ಸಂಖ್ಯೆಗಳಿರುತ್ತವೆ. ಅವುಗಳಲ್ಲಿ ಹೆಚ್ಚಾಗಿ ಎರಡು, ಮೂರು, ಐದು, ಏಳು ಸಂಖ್ಯೆಗಳು ಹೆಚ್ಚಾಗಿ ಬಳಸಲ್ಪಡುತ್ತವೆ. ಈ ಗೀತೆಯಲ್ಲೂ ಅಂತಹುದನ್ನು ಗುರ್ತಿಸಬಹುದಾಗಿದೆ. ಎರಡು ನಂಬಿಕೆ- ಜ್ಯೋತಿಷ್ಯ /ದುಸ್ವಪ್ನ ಎರಡು ಪದ್ದತಿ-ಆಹಾರ(ಭಾಗೀರಥಿ)/ಆತ್ಮಬಲಿ(ಮಾದೇವರಾಯ) ಎರಡು ಬಾರಿ ಕೆರೆಯ ಪ್ರವೇಶ-ಪೂಜಾ ಸಂಧರ್ಭ/ಬಟ್ಟಲು ತರುವ ಸಮಯ ಎರಡು ಸಾವು- ಒಂದೇ ಕೆರೆಯಲ್ಲಿ ಮೂರು ಮನೆತನ/ಮನೆ-ಗಂಡನ ಮನೆ, ತೌರುಮನೆ, ಗೆಳತಿಮನೆ. == ಪರಿಸಮಾಪ್ತಿ == ಈ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣು ಕೇವಲ ಒಂದು ಪರಿಕರವೆಂದು ಪರಿಗಣಿಸಲ್ಪಟ್ಟಿದ್ದಾಳೆ. "ಅತ್ತೆ-ಮಾವರಿಗಂಜುವ, ಸುತ್ತೇಳು ನೆರೆಗಂಜುವ" ಹೆಣ್ಣು ಹುಟ್ಟಿದ ಮನೆಗೂ, ಮೆಟ್ಟಿದ ಮನೆಗೂ ಹೆಸರನ್ನು ತರುವ ನಿಟ್ಟಿನಲ್ಲಿ ಎಷ್ಟೋ ಸಲ ತನ್ನ ಅಸ್ತಿತ್ವ ವನ್ನೇ ಕಳೆದುಕೊಳ್ಳುತ್ತಾಳೆ. ಆಡು, ಕುರಿ, ಕೋಳಿ,ಕೋಣಗಳನ್ನು ದೇವರಿಗೆ ಬಲಿಕೊಡುವಂತೆ, ಹೆಣ್ಣನ್ನು "ಬಲಿಪಶು" ವೆಂದು ಈ ಸಮಾಜ ಪರಿಗಣಿಸಿದೆ. ನಾಡಿನ, ಊರಿನ, ಗ್ರಾಮದ ಏಳಿಗೆಗೆ, ಅಭಿವೃದ್ಧಿಗೆ ಹೆಣ್ಣು ಬಲಿಯಾಗಿರುವಷ್ಟು ಬೇರಾವುದೇ ಪ್ರಾಣಿಗಳು ಪ್ರಾಯಶ: ಬಲಿಯಾಗಿಲ್ಲ. ಭಾಗೀರತಿಯ ಒಂಟೀಭಾವ, ಅನಾಥ ಪ್ರಜ್ಞೆ, ಪ್ರತಿಭಟಿಸಲಾರದ ಅಶಕ್ತತೆ, ಅಸಹಾಯಕತೆ, ಆತಂಕ, ನರಳಿಕೆ ಶೋಕ ನದಿಯಾಗಿ ಪ್ರವಹಿಸಿದೆ. ಜನಪದ ಸಮಾಜದ ಅಸಮಾನತೆ, ಅಪಮೌಲ್ಯಗೊಂಡ ಸಾಮಾಜಿಕ ಆಚರಣೆಯಲ್ಲಿನ ದೋಷ ಎದ್ದು ಕಾಣುತ್ತದೆ. ಈ ಘಟನೆ ತ್ಯಾಗ, ಬಲಿದಾನದ ಹೆಸರಿನಲ್ಲಿ ನಡೆದಿರುವ ಹೆಣ್ಣಿನ ಶೋಷಣೆಯಾಗಿದೆ. == ಆಕರ ಗಂಥಗಳು == ಕೆರೆಗೆ ಹಾರ- ಎಸ್.ಜಿ.ಸಿದ್ಧರಾಮಯ್ಯ ಕೆರೆಗೆ ಹಾರ- ಕನ್ನಡ ವಿಶ್ವಕೋಶ ಕೆರೆಗೆ ಹಾರ- ಕನ್ನಡ ವಿಷಯ ವಿಶ್ವಕೋಶ ಕೆರೆಗೆ ಹಾರ- ಭಾಗೀರಥಿಯ ಸಾವಿನ ಸುತ್ತ ಮುತ್ತ-ತಿ.ನಂ.ಶ್ರೀ == ಉಲ್ಲೇಖ == < />